Wednesday, 18 January 2012

ಖ್ಯಾಲು -೧೨





ಈ ಮಹಾನಗರದ ಬಿಸಿಲ
ರಣದಲ್ಲಿ ಒಂದು ದಿನ
ನನ್ನ ರಾಗ  ಕಳೆದು ಹೋಯಿತು
ರಾಗವಂತೆ ರಾಗ ನಕ್ಕರು ಮಂದಿ ಸರಾಗ
ಅವೆಲ್ಲ ಯಾರಿಗೆ ಬೇಕಾಗಿದೆ - ಹೆಚ್ಚಿನವರಿಗೆ
ಈಗ ಕೊತ್ತೊಂಬರಿ ಸೊಪ್ಪು
ಹಸಿಯಿದ್ದರೆ ಸಾಕಾಗಿದೆ. ನಡುವೆ
ವಸಂತದ ಬೇಗುದಿ
ಸಂಜೆಯಾದರೆ ಪ್ರತಿದಿನ ಯಾರೋ
ಮನೆಯೊಳಗೆ ಅಳುವ ಸದ್ದು ನಾವು ನೀವಲ್ಲ
ನೋಡಿದರೆ ಟೀವಿಗಳ
ಧಾರಾವಾಹಿಗಳ ದುಃಖ ಅದು.
ಬೆಚ್ಚಿಬಿದ್ದು ನೋಡುತ್ತೇನೆ ದುಃಖಗಳ ಮಾರಾಟ
ಮತ್ತೆ ಇಲ್ಲಿ  ಅದೇ ನಾನು ಹಾಡುತ್ತಿರುವ ಎಲ್ಲ
ರಾಗಗಳನ್ನು
ಭೂತಕನ್ನಡಿ ಹಿಡಿದು
ಹುಡುಕುತ್ತೇನೆ. ಕಳೆದುಕೊಂಡು ನನ್ನನ್ನೇ
ಅಲೆದಾಡುತ್ತೇನೆ. ಅಸ್ವಸ್ಥನಾಗಿ - ರಾಗವಂತೆ ರಾಗ - ಮಂದಿ
ನಗುತ್ತಾರೆ.
ನಮಗಿಷ್ಟವಾದ ರಾಗ ನಮ್ಮ ಜತೆ
ಯಾರು ತಾನೇ ಕೇಳುತ್ತಾರೆ. ಸದಾ  ನನ್ನ  ಒಣ ರಗಳೆ
ಅಂದುಕೊಂಡು
ಕಟುವಾಸ್ತವ ಎಂದೇ ಎಲ್ಲರೂ ಬಾಳುತ್ತಾರೆ. ಅಂದುಕೊಂಡು
ನಿಜವಾಗಿಯೂ ಇಲ್ಲಿ ರಾಗಗಳ ಬದಲು
ಕೇವಲ ಸರಕುಗಳಿವೆ. ರೆಡಿಮೇಡ್ ಬದುಕಿದೆ
ಮತ್ತು ಕನಸಿನ ಜಾಗದಲ್ಲಿ ಭ್ರಮೆಗಳಿವೆ
ಮತ್ತು  ಮರಗಳ ಸ್ಥಳದಲ್ಲಿ ನಗರಗಳಿವೆ
ಕೋಗಿಲೆ ಕರೆಂಟಿನ ಕಂಬದ ತುದಿಯಲ್ಲಿದೆ ತುಟಿ ಬಿಚ್ಚದೆ.
ರಾಗವಂತೆ ರಾಗ
ಯಾರಿಗೆ ಬೇಕಾಗಿದೆ. ಕೊತ್ತೊಂಬರಿ ಸೊಪ್ಪು ಸರಾಗ
ಹಸಿಯಿದ್ದರೆ ಸಾಕಾಗಿದೆ.
ನಗುತ್ತಾರೆ ಕೇಳಿದರೆ  ಮಂದಿ - ರಾಗವಂತೆ ರಾಗ -
ಸದಾ ಇದೊಂದು  ರೋಗ
ಎಂಬ ಹಾಗೆ.

1 comment:

  1. Namaskara GurugaLe,

    Great work !
    would like to meet you..it is more than 20 years since I met you...

    Nimma shishya, 'udupi yakshara' balagopala, Chidananda

    ReplyDelete