Sunday, 29 January 2012

ಕಾವ್ಯ - poetry 3

ಖ್ಯಾಲು 56




ನಿಜವಾಗಿ
ಬೇಸರವಾದರೆ
ನಾನು ಬರೆದೇನು
ನಿನ್ನ ಕುರಿತು - ಆದರೆ ನಿನ್ನ ಕುರಿತು ನನಗೆ
ಬೇಸರವಿಲ್ಲವಲ್ಲ. ನಿನ್ನ ಸವಿ ಕುಶಾಲು
ನಡುವೆ ಮದ್ಯದ ಬಾಟಲು

ಎಷ್ಟಾದರೂ
ನೀನೋ ವ್ಯಸನಿ ಕುಡುಕ
ನಾನೋ  ಕುಡಿಯದೆ ವ್ಯಸನಿ ನಿನಗಾಗಿ
ರಾತ್ರಿಗಳ ಕಳೆಯೋಣ ಬಾ
ಅಂದೆ ಬಾರಿನಲ್ಲಿ
ಅಲ್ಲಿ ಗಂಡಸರು ಹೆಣ್ಣಾಗಿ
ಹೆಂಗಸರು ಗಂಡಾಗಿ - ಆಗಿ ಜ್ಯೋತಿರ್ಲಿಂಗ
ನೃತ್ಯಕ್ಕೆ ಕಳಚಿ ಬೀಳುವುದು ಒಂದೊಂದೇ ಲಂಗ.

ಏನೇ ಇರಲಿ
ಹಾಡು ಹಗಲೇ ಕುಡಿಯುವವರೆಂದರೆ
ಹಗಲು ಕುಡಿದು ಹಾಡುವವರೆಂದರ್ಥ
ನಿಜವಾಗಿ ಇದೊಂದು ಜೋಕೇ ಅಂದೆ
ನೀನೋ ವ್ಯಸನಿ ನಾನು ಜೋಕೆ ಅಂದೆ
ನಿನ್ನ ಕುರಿತು

ಬೇಸರವಾದರೆ ಬರೆದೇನು ಒಂದು ಕವನ
ಆದರೆ ನನಗೆ ಬೇಸರವಿಲ್ಲವಲ್ಲ. ಅದೇ  ನನ್ನ ಸೋಲು.
ಮಾತೃಭಾಷೆ ಹೊಸತಾಗಿ
ಕಲಿಯುವುದೇ ಮೇಲು......


Wednesday, 18 January 2012

ಖ್ಯಾಲು -೧೨





ಈ ಮಹಾನಗರದ ಬಿಸಿಲ
ರಣದಲ್ಲಿ ಒಂದು ದಿನ
ನನ್ನ ರಾಗ  ಕಳೆದು ಹೋಯಿತು
ರಾಗವಂತೆ ರಾಗ ನಕ್ಕರು ಮಂದಿ ಸರಾಗ
ಅವೆಲ್ಲ ಯಾರಿಗೆ ಬೇಕಾಗಿದೆ - ಹೆಚ್ಚಿನವರಿಗೆ
ಈಗ ಕೊತ್ತೊಂಬರಿ ಸೊಪ್ಪು
ಹಸಿಯಿದ್ದರೆ ಸಾಕಾಗಿದೆ. ನಡುವೆ
ವಸಂತದ ಬೇಗುದಿ
ಸಂಜೆಯಾದರೆ ಪ್ರತಿದಿನ ಯಾರೋ
ಮನೆಯೊಳಗೆ ಅಳುವ ಸದ್ದು ನಾವು ನೀವಲ್ಲ
ನೋಡಿದರೆ ಟೀವಿಗಳ
ಧಾರಾವಾಹಿಗಳ ದುಃಖ ಅದು.
ಬೆಚ್ಚಿಬಿದ್ದು ನೋಡುತ್ತೇನೆ ದುಃಖಗಳ ಮಾರಾಟ
ಮತ್ತೆ ಇಲ್ಲಿ  ಅದೇ ನಾನು ಹಾಡುತ್ತಿರುವ ಎಲ್ಲ
ರಾಗಗಳನ್ನು
ಭೂತಕನ್ನಡಿ ಹಿಡಿದು
ಹುಡುಕುತ್ತೇನೆ. ಕಳೆದುಕೊಂಡು ನನ್ನನ್ನೇ
ಅಲೆದಾಡುತ್ತೇನೆ. ಅಸ್ವಸ್ಥನಾಗಿ - ರಾಗವಂತೆ ರಾಗ - ಮಂದಿ
ನಗುತ್ತಾರೆ.
ನಮಗಿಷ್ಟವಾದ ರಾಗ ನಮ್ಮ ಜತೆ
ಯಾರು ತಾನೇ ಕೇಳುತ್ತಾರೆ. ಸದಾ  ನನ್ನ  ಒಣ ರಗಳೆ
ಅಂದುಕೊಂಡು
ಕಟುವಾಸ್ತವ ಎಂದೇ ಎಲ್ಲರೂ ಬಾಳುತ್ತಾರೆ. ಅಂದುಕೊಂಡು
ನಿಜವಾಗಿಯೂ ಇಲ್ಲಿ ರಾಗಗಳ ಬದಲು
ಕೇವಲ ಸರಕುಗಳಿವೆ. ರೆಡಿಮೇಡ್ ಬದುಕಿದೆ
ಮತ್ತು ಕನಸಿನ ಜಾಗದಲ್ಲಿ ಭ್ರಮೆಗಳಿವೆ
ಮತ್ತು  ಮರಗಳ ಸ್ಥಳದಲ್ಲಿ ನಗರಗಳಿವೆ
ಕೋಗಿಲೆ ಕರೆಂಟಿನ ಕಂಬದ ತುದಿಯಲ್ಲಿದೆ ತುಟಿ ಬಿಚ್ಚದೆ.
ರಾಗವಂತೆ ರಾಗ
ಯಾರಿಗೆ ಬೇಕಾಗಿದೆ. ಕೊತ್ತೊಂಬರಿ ಸೊಪ್ಪು ಸರಾಗ
ಹಸಿಯಿದ್ದರೆ ಸಾಕಾಗಿದೆ.
ನಗುತ್ತಾರೆ ಕೇಳಿದರೆ  ಮಂದಿ - ರಾಗವಂತೆ ರಾಗ -
ಸದಾ ಇದೊಂದು  ರೋಗ
ಎಂಬ ಹಾಗೆ.

Tuesday, 10 January 2012

ಕಾವ್ಯ - poetry ೨

ಖ್ಯಾಲು ೯೯




ಆಕಾಶಕ್ಕೆ ಇರಲು ಮಾತ್ರ ಸಾಧ್ಯ

ತನ್ನನ್ನೆ ನೋಡಿಕೊಳ್ಳುವುದು ಅಸಾಧ್ಯ

ಆಕಾಶಕ್ಕೆ ಮೈತುಂಬ

ನಕ್ಷತ್ರಗಳಿದ್ದರೂ ಇದ್ದಂತಲ್ಲ

ಪ್ರತಿಯೊಂದು ಸೌಂದರ್ಯಕ್ಕೂ ತನ್ನೊಳಗೆ ಕಣ್ಣುಗಳಿಲ್ಲ.

ಹರಿಯುವ ನೀರು ಹರಿಯುವುದ ಅರಿತಂತಿಲ್ಲ.

ಇದ್ದಂತೆ ತಾನು ಅದಕ್ಕೆ ತಿಳಿಯಲು ಬರುವುದಿಲ್ಲ

ಭೂಮಿಗಿದೆ ಎಂಥ ಸಂಕಟ ಒಳಗೆ

ಯಾವುದೂ ಬರುವುದಿಲ್ಲ ಶಾಶ್ವತ ನೆಲೆಗೆ

ಕಣ್ಣಿಗೆ ಕಣ್ಣನ್ನು ನೋಡಿಕೊಳ್ಳಲು ಬರುವುದೇ?

ಮೈಗೆ ತನ್ನನ್ನು ತಾನು ಸ್ಪರ್ಶಿಸಲು ಸಾಧ್ಯವೇ?

ಬರೆದದ್ದು ತಿಳಿಯುವುದೇ ಶಬ್ಧಗಳಿಗೆ?